ಕೆಲಸದ ವಿಶ್ಲೇಷಣೆ	

ಒಂದು ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಕೆಲಸಗಾರ ಪಡೆದಿರಬೇಕಾದ ಗುಣಗಳೇನು ಎಂಬುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ಆ ಕೆಲಸದ ವಿಭಜನೆ (ಜಾಬ್ ಅನಾಲಿಸಿಸ್). ಜಾಬ್ ಅನಾಲಿಸಿಸ್ ಎಂಬ ಶಬ್ದವನ್ನು ಮೊಟ್ಟಮೊದಲಿಗೆ ಬಳಸಿದವರು ಅಮೆರಿಕನ್ ಸೇನೆಯ ಕರ್ಮಚಾರೀ ವರ್ಗದವರು. ಉಪಜೀವಿಕಾ ಚಟುವಟಿಕೆಗಳನ್ನು ವಿಶ್ಲೇಷಿಸಿ, ಪ್ರತಿಯೊಂದು ಉಪಜೀವಿಕೆಯ ಕರ್ಮಚಾರಿಯೂ ಏನು ಮಾಡಬೇಕು, ಏನಾಗಬೇಕು ಎಂಬುದನ್ನು ಖಚಿತಗೊಳಿಸುವಂತೆ ಕಾರ್ಯನಿಷ್ಕರ್ಷೆ ಮಾಡುವ ಉದ್ದೇಶದಿಂದ ಅವರು ಈ ವಿಧಾನವನ್ನು ಆರಂಭಿಸಿದರು. ಆ ಕಾಲದಲ್ಲಿ ನಾನಾ ಹುದ್ದೆಗಳಿಗೆ ಕೆಲಸಗಾರರನ್ನು ಆರಿಸಲು ಈ ವಿಶಿಷ್ಟ ವಿವರಣೆಗಳೇ ಆಧಾರವಾಗಿ ಸ್ವೀಕೃತವಾದುವು. ಎರಡನೆಯ ಮಹಾಯುದ್ಧದ ಅನಂತರಕಾಲದಲ್ಲಿ ಕಾರ್ಯ ವಿಶ್ಲೇಷಣೆಯ ತತ್ತ್ವವನ್ನು ಕೈಗಾರಿಕೆ, ಶಿಕ್ಷಣ ಹಾಗೂ ಇವಕ್ಕೆ ಸಂಬಂಧಪಟ್ಟ ಇತರ ಕ್ಷೇತ್ರಗಳಿಗೂ ವಿಸ್ತರಿಸಲಾಯಿತು. ಕಸಬಿನ ಮಾರ್ಗಪ್ರದರ್ಶನವನ್ನು ಕುರಿತು ತನಿಖೆ ನಡೆಸುವವರು ಇದನ್ನು ಕಸಬಿನ ವಿಶ್ಲೇಷಣೆ ಎಂದು ಕರೆಯುತ್ತಾರೆ. ಕಳೆದ ಕೆಲವು ವರ್ಷಗಳಿಂದ ಕಸಬಿನ ಚಟುವಟಿಕೆಗಳನ್ನು ಅವುಗಳ ಸಂಘಟಕಾಂಗಗಳಾಗಿ ವಿಶ್ಲೇಷಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಒಂದು ಕಸಬನ್ನು ಆರಿಸಿಕೊಳ್ಳಲು ಆಧಾರವನ್ನು ಗೊತ್ತುಪಡಿಸಲು ಯತ್ನಿಸಿದ್ದಾರೆ. ಆಮೇಲೆ ಈ ಬಗೆಯ ಅನೇಕ ಪಥಗಾಮೀ ಅಧ್ಯಯನಗಳು ಫ್ರೆಡರಿಕ್ ಜೆ.ಆಲೆನ್ ಮುಂತಾದ ಹಲವರಿಂದ ನಡೆದಿವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಉದ್ಯೋಗ ಸೇವಾ ಸಂಸ್ಥೆಗಳಂಥ ಪರಿಣತ ಸಂಸ್ಥೆಗಳೂ ಈ ವಿಚಾರವಾಗಿ ಅಧ್ಯಯನ ನಡೆಸಿವೆ. ಇವು ಪ್ರತಿಯೊಂದು ಕಾರ್ಯದ ವಿವರಗಳನ್ನೂ ತಯಾರಿಸಿವೆ. ಅಭ್ಯರ್ಥಿಗಳನ್ನು ನಾನಾ ಕಾರ್ಯಗಳಿಗೆ ಆರಿಸುವಾಗ ಈ ವಿವರಗಳು ಸಹಾಯಕವಾಗಿವೆ. ರಿಚ್ಮಂಡ್ ನಗರದವರು ಏರ್ಪಡಿಸಿದ್ದ ಸಮಾಜ ಪರಿಶೀಲನೆ, ಕ್ಲೀವ್‍ಲೆಂಡ್ ನಗರದವರ ಸಮಾಜ ಪರಿಶೀಲನೆ-ಇವು ಉದಾಹರಣೆಗಳು. ಈ ನಾನಾ ಪರಿಶೀಲನೆಗಳಲ್ಲಿ ಕಾರ್ಯ ವಿಶ್ಲೇಷಣೆಯ ವಿಧಾನವನ್ನು ಅಳವಡಿಸಲಾಗಿತ್ತು. ಸಮಾಜಗಳ ನಾನಾ ಉದ್ಯೋಗಗಳಿಗೆ ಸಂಬಂಧಿಸಿದ ಕಲಾಪಗಳ ವರ್ಗೀಕರಣ ಹಾಗೂ ವಿವರಣೆಗಳು ಈ ವರದಿಯಲ್ಲಿ ಅಡಕವಾಗಿವೆ. ಈ ಪರಿಶೀಲನೆಗಳು ಮಾತ್ರವೇ ಅಲ್ಲದೆ ಹೆಚ್ಚು ಕಡಿಮೆ ಪ್ರಯೋಗಶಾಲಾ ವಿಧಾನದಲ್ಲಿ ಅನೇಕ ವಿಶ್ಲೇಷಣೆಗಳನ್ನೂ ಮಾಡಲಾಗಿದೆ. ಶಿಕ್ಷಣ ನೀಡುವ ವಿಧಾನಗಳನ್ನು ರೂಪಿಸುವ ಉದ್ದೇಶದಿಂದ ಉದ್ಯೋಗ ಕಾರ್ಯಗಳನ್ನು ವಿಚ್ಛೇದಿಸಿ ನೋಡುವುದೇ ಇವುಗಳ ಉದ್ದೇಶ. ಮನಶ್ಯಾಸ್ತ್ರಜ್ಞರು ಇನ್ನೂ ಹೆಚ್ಚು ಕಟ್ಟುನಿಟ್ಟಾದ ಪ್ರಯೋಗಶಾಲಾ ವಿಧಾನದಲ್ಲಿ ಈ ವಿಚಾರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಶಿಕ್ಷಾರ್ಥಿಗಳ ತರಬೇತಿನಲ್ಲಿ ಉಪಯೋಗಿಸಬಹುದಾದ ಕಲಿಕೆಯ ಅಂಶಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಈ ವಿಶ್ಲೇಷಣೆ. ಮಿನ್ನೆಸೋಟ ವಿಶ್ವವಿದ್ಯಾಲಯದ ಉದ್ಯೋಗ ಸ್ಥೀರೀಕರಣ ಸಂಶೋಧನ ಸಂಸ್ಥೆ (1931-35) ಉದ್ಯೋಗ ಸಾಮಥ್ರ್ಯ ಮಾದರಿಗಳ ರೂಪದಲ್ಲಿ ಮನೋವೈಜಾÐನಿಕ ವಿಶ್ಲೇಷಣೆಗಳನ್ನು ರೂಪಿಸಿದೆ.

ವಿಧಾನ: ಕಾರ್ಯವಿವರಣ ಅಥವಾ ಅರ್ಹತಾ ನಿರ್ಣಯ ಮಾಡುವ ಸಲುವಾಗಿ ಅನೇಕ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ಸಂಪಾದಿಸಬಹುದಾದ ವೇತನದ ಮೊತ್ತವೆಷ್ಟು, ಕಾರ್ಮಿಕರಿಗಾಗಿ ಬೇಡಿಕೆ ಯಾವ ರೀತಿಯಲ್ಲಿ ವ್ಯತ್ಯಾಸವಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕು. ಅಂತೆಯೇ ಭೌತಿಕ ದೈಹಿಕ ಮಾನಸಿಕ ಸಾಮಾಜಿಕ ದೃಷ್ಟಿಗಳಿಂದಲೂ ವಿಶ್ಲೇಷಣೆಯನ್ನು ನಡೆಸಬೇಕು. ಹೀಗೆ ನಿಜವಾದ ವಿಶ್ಲೇಷಣೆಗೆ ಔದ್ಯೋಗಿಕ ಕಾರ್ಯಚಟುವಟಿಕೆಯ ಸಮಗ್ರದೃಷ್ಟಿ ಅಗತ್ಯ; ಇದೇ ವಿಶ್ಲೇಷಣೆಯ ಫಲಿತಾಂಶವೂ ಹೌದು. ಶಾಸ್ತ್ರ ಸಮ್ಮತವಾದ ಫಲಿತಾಂಶಗಳನ್ನು ನೀಡಬಲ್ಲಂತೆ ರೂಪಿತವಾದ ವಿಧಾನ ವೈಜಾÐನಿಕ ವಿಧಾನಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು. ಪೂರ್ವಾಗ್ರಹ ಪೀಡಿತವಾಗಿರಬಾರದು: ಪರಿಸ್ಥಿತಿಯ ಖಚಿತನಿರ್ಣಯವಾಗಬೇಕೆಂಬ ಆಶಯವೊಂದೇ ಇರಬೇಕು. ವಿಶ್ಲೇಷಣಾತ್ಮಕವಾದ ಅನುಸಂಧಾನ ಕಾರ್ಯ ನಿರ್ವಹಿಸುವಾಗ ಆ ಕಾರ್ಯ ಯಾವ ವ್ಯಾವಸಾಯಿಕ ಕ್ಷೇತ್ರದಲ್ಲಿದೆಯೋ ಆ ಇಡೀ ಕ್ಷೇತ್ರದ ಪರಿಶೀಲನೆ ನಡೆಸುವುದೇ ಮೊದಲನೆಯ ಕೆಲಸ. ಸಾಮಾಜಿಕ ವ್ಯವಸ್ಥೆಗೂ ಇದಕ್ಕೂ ಇರುವ ಸಂಬಂಧವನ್ನು ನಿಷ್ಕರ್ಷಿಸಲು ಇದು ಅಗತ್ಯ. ಅನಂತರ ಇದನ್ನು ನಾನಾ ಉದ್ಯೋಗಗಳಾಗಿ ವಿಂಗಡಿಸಬೇಕು. ಇವುಗಳ ಪರಸ್ಪರ ಸಂಬಂಧಗಳ ದೃಷ್ಟಿಯಲ್ಲಿ ಇದನ್ನು ವಿವರಿಸಬೇಕು; ಅನಂತರ ಪ್ರತಿಯೊಂದು ಉದ್ಯೋಗವಿಭಾಗವನ್ನೂ ವಿವರಿಸಿ, ಅದನ್ನು ಮತ್ತೆ ಸಣ್ಣ ಘಟಕಗಳಾಗಿ ವಿಭಾಗಿಸಬೇಕು. ಈ ವರ್ಗೀಕರಣವನ್ನು ಕೇವಲ ಅವಲೋಕನದಿಂದಲೇ ಮಾಡಬಹುದು. ನಾನಾ ಕ್ರಿಯೆಗಳನ್ನು ಪ್ರಥಮತಃ ಪರಿಮಾಣಾತ್ಮಕವಾಗಿ ವಿವರಿಸಬಹುದು; ಜೊತೆಗೆ ಗುಣಾತ್ಮಕವಾಗಿಯೂ ವಿವರಿಸಬಹುದು.

ಈ ವಿಧಾನದಲ್ಲಿ ಉತ್ಪಾದನಕಾರ್ಯಗಳಿಗೆ ಸಂಬಂಧಿಸಿದ ಚಲನೆಗಳನ್ನು ಮತ್ತು ಕಾಲಾವಕಾಶಗಳನ್ನು ಅಳೆಯುವ ವಿಧಾನಗಳೂ ಸಾಕಷ್ಟು ಪ್ರಾಮುಖ್ಯಗಳಿಸಿವೆ.

ಒಟ್ಟಿನಲ್ಲಿ ಕೆಲಸದ ವಿಶ್ಲೇಷಣೆ ಅನಗತ್ಯಚಲನೆಗಳನ್ನು ನಿವಾರಿಸಿ, ಶಿಷ್ಟ ದಿನದ ಕೆಲಸವನ್ನು ಗೊತ್ತುಪಡಿಸುವುದರಲ್ಲೂ ವೇತನಗಳನ್ನು ನಿರ್ಣಯಿಸುವುದರಲ್ಲೂ ಯಥಾರ್ಥ ವೆಚ್ಚವನ್ನು ಗೊತ್ತುಪಡಿಸುವುದರಲ್ಲೂ ವೇತನ ಶ್ರೇಣಿಗಳನ್ನೂ ಬಡತಿಯ ಮಾರ್ಗಗಳನ್ನೂ ವಿನ್ಯಾಸಗೊಳಿಸುವುದರಲ್ಲೂ ಉದ್ಯೋಗ ಪರೀಕ್ಷಾ ಕ್ರಮಗಳನ್ನು ಕಂಡುಹಿಡಿಯುವುದರಲ್ಲೂ ವ್ಯಾವಸಾಯಿಕ ಶಿಕ್ಷಣದ ಪಾಠಕ್ರಮವನ್ನು ಸ್ಥಾಪಿಸುವುದರಲ್ಲೂ ವ್ಯಾವಸಾಯಿಕ ಚಟುವಟಿಕೆಗಳನ್ನು ಬೋಧಿಸುವ ನಾನಾ ವಿಧಾನಗಳನ್ನು ನಿರ್ಣಯಿಸುವುದರಲ್ಲೂ ಯಾವ ಉದ್ಯೋಗವನ್ನು ಆರಿಸಿಕೊಳ್ಳಬೇಕೆಂಬ ವಿಚಾರವಾಗಿ ಸೂಕ್ತ ಆಧಾರವನ್ನು ಪಡೆಯುವುದರಲ್ಲೂ ಕೊನೆಯದಾಗಿ ಕಾರ್ಮಿಕರನ್ನು ಆರಿಸಲು ಸಾಧ್ಯವಾಗುವಂತೆ ಕೆಲಸದ ವಿವರಣೆಗಳನ್ನು ರೂಪಿಸುವುದರಲ್ಲೂ ಪ್ರಮುಖ ಪಾತ್ರ ನಿರ್ವಹಿಸಬಲ್ಲುದು.   

 (ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ